ಕಳ್ಳ ರಾಮನ ಕುಸ್ತಿ ಪಾಠ

ಕಳ್ಳ ರಾಮನ ಕುಸ್ತಿ ಪಾಠ

ಈಚೀಚೆಗೆ ನಮ್ಮ ಹಳ್ಳಿಗಳಲ್ಲಿ ಜೂಜು, ಕಳವು, ಕೋಳಿ ಕಾಳಗ, ಕೊಲೆ, ಸುಲಿಗೆ, ದರೋಡೆ, ಹಾದರ, ಜಗಳ ಮುಂತಾದ ಸಂಪ್ರದಾಯಗಳು ತಮ್ಮ ಕಲಾವಂತಿಕೆಯನ್ನು ಕಳೆದುಕೊಂಡು ಬರೇ ಕ್ರಿಯೆಗಳಾಗಿ ಉಳಿದುಬಿಟ್ಟಿವೆ. ಹಿಂದಿನವರು ಮನರಂಜನೆಯ ದೃಷ್ಟಿಯಿಂದ ಕೋಳಿ ಕಾಳಗ, ಬೇಟೆ ಮುಂತಾದ ವಿನೋದಗಳಲ್ಲಿ ಭಾಗವಹಿಸ್ತುತ್ತಿದ್ದರೆ ಇಂದಿನವರಿಗೆ ಮಾಂಸದಲ್ಲಷ್ಟೇ ಕಣ್ಣು – ಇದು ಅಧಃಪತನದ ಮಿತಿ.

ಇಂಥ ಸಂಪ್ರದಾಯಗಳಲ್ಲೊಂದಾದ ಫೈಟಿಂಗನ್ನು ಊರ್ಜಿತಗೊಳಿಸಿ, ಅದಕ್ಕೆ ಮೊದಲಿನ ಸ್ಥಾನವನ್ನು ತಂದುಕೊಡಲು ಪ್ರಯತ್ನಿಸಿದವರಲ್ಲಿ ನಮ್ಮೂರಿನ ಕಳ್ಳ ರಾಮನದು ಸ್ಮರಣೀಯವಾದ ಹೆಸರು. ಅದಕ್ಕೋಸ್ಕರ ಅವನು ತನ್ನ ಜೀವವನ್ನೇ ಪಣವೊಡ್ಡಿದನು.

ಕಳ್ಳ ರಾಮನಿಗೆ ಆ ಹೆಸರು ಬಂದುದು ದುರದೃಷ್ಟಕರ ಮಾತ್ರವಲ್ಲ, ಹೆಸರು ಹೇಗೆ ಮನುಷ್ಯನ ಭವಿಷ್ಯವನ್ನು ನಿರ್ಣಯಿಸುತ್ತದೆ ಎಂಬುದಕ್ಕೆ ಚೊಕ್ಕದಾದ ಉದಾಹರಣೆ ಕೂಡ. ಕಳ್ಳ ರಾಮನು ಚಿಕ್ಕಂದಿನಲ್ಲೊಮ್ಮೆ ಬೀಡಿಗೆ ಕಾಸಿಲ್ಲದೆ ಗೌಡರ ತೋಟದಿಂದ ಒಂದು ಗೊನೆ ಅಡಿಕೆ ಇಳಿಸಿ ಶೆಟ್ಟರ ಅಂಗಡಿಯಲ್ಲಿ ಮಾರಿದನು. ಹೀಗೆ ಮಾರಿದ ಮೇಲೆ ಚಹಾ, ಸಿನಿಮಾ ಮುಂತಾದ ಅಗತ್ಯಕ್ಕೂ ನಾಲ್ಕು ಕಾಸು ತನ್ನ ಜೇಬಿನಲ್ಲಿ ಮಿಕ್ಕುಳಿದುದನ್ನು ಕಂಡು ಅವನಿಗೆ ಸಂತೋಷವಾಯಿತು.

ವಾಸ್ತವಕ್ಕೂ ಅದು ಗೌಡರ ತೋಟವೆಂದು ರಾಮನಿಗೆ ತಿಳಿದಿರಲಿಲ್ಲ. ತಿಳಿದಿದ್ದರೆ ಅದರೆ ತಂಟಿಗೇ ಹೋಗುತ್ತಿರಲಿಲ್ಲ. ಗೌಡರಿಗೂ ದುರಾಸೆ. ಸರಕಾರಿ ಭೂಮಿಯಲ್ಲೆಲ್ಲ ಸಸಿ ಹಾಕಿ ಅದು ತಮ್ಮದೆಂದು ಬರೇ ಬೆದರಿಕೆ ಹಾಕಿ ದಕ್ಕಿಸಿಕೊಳ್ಳುತ್ತಿದ್ದರು. ಊರಿನ ಜವ್ವನೆಯರಿಗೆ ಉದಾರವಾಗಿ ದಾನ ಮಾಡುತ್ತಿದ್ದ ಗೌಡರು ರಾಮನು ಒಂದು ಗೊನೆ ಅಡಿಕೆ ಜಾರಿಸಿದ್ದನ್ನು ಮನಸ್ಸಿಗೆ ಹಚ್ಚಿಕೊಂಡರು. ಅವನನ್ನು ಹಿಡಿಸಿ ಅಂಗಳದ ಮಧ್ಯೆ ಗೂಟಕ್ಕೆ ಎಲ್ಲರಿಗೂ ಕಾಣುವಂತೆ ಕಟ್ಟಿ ಹಾಕಿದರು. ಕಾಡಿನಿಂದ ಹೊಸತಾಗಿ ಕೆಂಪಿರುವೆಗಳ ಗೂಡುಗಳನ್ನು ಕೇಳಿಸಿ ಅವನ ತಲೆಯ ಮೇಲೆ ಕೊಡವಿಸಿದರು. ವೈಶಾಖದ ಸುಡು ಬಿಸಿಲಿನಲ್ಲಿ ರಾಮ ಹುಯ್ಯಲಿಡ ತೊಡಗಿದ. ಯಾರೂ ಕೇಳಿಸಿಕೊಳ್ಳಲಿಲ್ಲ.

ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂಬುದು ಹಿಂದಿನ ಮಾತಾಯಿತು. ಅಡಿಕೆಗೆ ಅನೆಯಷ್ಟೇ ಬೆಲೆ ಬಂದ ಮೇಲೆ ಈ ಮಾತಿಗೆ ಅರ್ಥವಿಲ್ಲ. ಎಲ್ಲರೂ ತನ್ನನ್ನು ಕಳ್ಳ ರಾಮನೆಂದು ಕರೆಯುತ್ತಿದ್ದುದರಿಂದ ಉಪಾಯವಿಲ್ಲದೆ ರಾಮನು ಸಣ್ಣ ಪುಟ್ಟ ಕಳ್ಳತನಗಳನ್ನು ಮಾಡಬೇಕಾಗಿ ಬಂತು. ಆದರೆ ಹೀಗೇ ಎಷ್ಟುದಿನ ಮುಂದರಿಯಲು ಸಾಧ್ಯ? ಯಾವ ಯಾವ ಕೀಲುಗಳಿಗೆ ಎಷ್ಟು ಎಷ್ಟು ಎಣ್ಣೆ ಹಚ್ಚಬೇಕೆಂಬುದು ಆಗ ಇನ್ನೂ ಹವ್ಯಾಸಿಯಾಗಿದ್ದ ರಾಮನಿಗೆ ಗೊತ್ತಿರಲಿಲ್ಲ. ಆದ್ದರಿಂದ ಆರು ತಿಂಗಳ ಜೈಲುವಾಸ ಅನಿವಾರ್ಯವಾಯಿತು.

೦ ೦ ೦
ಜೈಲಿನ ತಂಪಾದ ಸೆಲ್ಲಿನಲ್ಲಿ ಕುಳಿತು ರಾಮನು ಮುಂದಿನ ಹಂಚಿಕೆಗಳ ಕುರಿತು ಚಿಂತಿಸತೊಡಗಿದನು. ಕೇವಲ ಕಳ್ಳತನವೊಂದನ್ನೇ ನಮ್ಬಿ ಬದುಕುವುದು ಇನ್ನು ಮುಂದೆ ಅಸಾಧ್ಯವಾಗಿತ್ತು. ಏನು ಮಾಡುವುದು? ಹೀಗೆ ಯೋಚನೆಯಲ್ಲಿ ಬಿದ್ದವನಿಗೆ ದಾರಿ ಕಾಣಿಸಿದುದು ಕುಸ್ತಿ ಮಲ್ಲಣ್ಣ ಅಖಾಡದಲ್ಲಿ ತಪ್ಪು ಪಟ್ಟುಗಳನ್ನು ಹಾಕಿ,ಬೇಕೆಂತಲೆ ತನ್ನ ಎದುರಾಳಿಯನ್ನು ಗತಿ ಕಾಣಿಸಿದ ಎಂಬ ಆಪಾದನೆಗೆ ಒಳಪಟ್ಟು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ವ್ಯರ್ಥವಾಗುತ್ತಿದ್ದ ತನ್ನ ವಿದ್ಯೆಯನ್ನು ರಾಮನಿಗೆ ಧಾರೆಯೆರೆಯಲು ಅವನು ಸಂತೋಷದಿಂದ ಒಪ್ಪಿದನು.

ಆದರೆ ರಾಮನೇನೂ ಕುಸ್ತಿಪಟುವಾಗಲು ಬಯಸಿರಲಿಲ್ಲ. ಆ ವಿದ್ಯೆಯನ್ನು ಜನರ ಮುಂದೆ ಅಖಾಡದಲ್ಲಿ ಪ್ರದರ್ಶಿಸುವ ಆಸೆಯೂ ಇರಲಿಲ್ಲ. ತನ್ನನ್ನು ಕಂಡರೆ ನಾಲ್ಕು ಜನರು ಭಯ ಪಡಬೇಕು. ಅಗತ್ಯ ಬಿದ್ದರೆ ಎದುರಾಳಿಯನ್ನು ಧರೆಗೆರಗಿಸಲು ತನಗೆ ತಿಳಿದಿರಬೇಕು ಎಂಬುದಕ್ಕಷ್ಟೇ ಅವನ ಆಸೆ ಸೀಮಿತವಾಗಿತ್ತು. ಅನೇಕ ಹಿಂದಿ, ತಮಿಳು ಸಿನಿಮಾಗಳಲ್ಲಿ ಫೈಟಿಂಗ್ ನೋಡಿ ಅವನು ಪ್ರಭಾವಿತನಾಗಿದ್ದ. ಒಂದೆರಡು ತಿಂಗಳುಗಳಲ್ಲೇ ರಾಮನು ತನಗೆ ಬೇಕು ಬೇಕಾದ ಹಿಡಿತ ಪಟ್ಟುಗಳನ್ನು ಮಲ್ಲಣ್ಣನಿಂದ ಕಲಿತುಕೊಂಡನು. ಕೊನೆಗೊಂದು ದಿನ ಈ ಹೊಸ ರಕ್ಷಣೆಯೊಂದಿಗೆ ಜೈಲಿನಿಂದ ಹೊರಬಿದ್ದು ಊರಿಗೆ ಬಂದನು.

ಊರಿಗೆ ಬಂದ ಕಳ್ಳ ರಾಮನನ್ನೀಗ ಜನರು ಮೊದಲಿನಿಂತೆ ಗೇಲಿ ಮಾಡುವಂತಿರಲಿಲ್ಲ. ಹಾಗೆ ಗೇಲಿ ಮಾಡಿದ ಒಂದಿಬ್ಬರನ್ನು ಅವನು ನೆಲದಲ್ಲಿ ಮಲಗಿಸಿದ ಮೇಲೆ ಎಲ್ಲರೂ ಭಯಗೊಂಡರು. ಅವನು ಬಂದು ಚಹಾ ಕುಡಿದರೆ ದುಡ್ಡು ಕೇಳುವುದಕ್ಕೆ ಅಂಗಡಿಯವರು ಮರೆತುಬಿಡುತ್ತಿದ್ದರು. ತನ್ನ ಅತ್ಯಗತ್ಯಗಳಿಗೆಷ್ಟೇ ರಾಮನು ಅಡಿಕೆ ಗೊನೆಗಳನ್ನು ಇಳಿಸಿಕೊಳ್ಳುತ್ತಿದ್ದ. ಛಲೋ ಹೆಣ್ಣೊಂದನ್ನು ಮದುವೆಯಾಗಿ ಒಂದು ಥರ ನಿಯತ್ತಿನ ಜೀವನವನ್ನು ಸಾಗಿಸತೊಡಗಿದ. ಹಿನ್ನೋಟದಲ್ಲಿ ನೋಡಿದಾಗ ಜೈಲಿಗೆ ಹೋಗಿ ಬಂದದ್ದು ಒಳ್ಳೇದೇ ಆಯಿತು ಎನಿಸಿತು ಅವನಿಗೆ.

ಹೀಗಿರುತ್ತ ಒಂದು ದಿನ ನಮ್ಮೂರ ಪೇಟೆಯಲ್ಲಿ ಧಾಂಡಿಗನೊಬ್ಬ ಎಲ್ಲಿಂದಲೋ ಪ್ರತ್ಯಕ್ಷನಾದ. ಕೆಂಗಣ್ಣುಗಳು, ಎತ್ತಿದರೆ ಮಾಂಸ ಖಂಡಗಳು ತೊನೆಯುತ್ತಿದ್ದ ಕೈಗಳು, ಸಕಲರನ್ನೂ ಕುಳ್ಳರನ್ನಾಗಿ ಮಾಡುವ ಎತ್ತರದ ನಿಲುವು. ಬಂದವನೇ ಪೈಗಳ ಹೋಟೇಲಿನಲ್ಲಿ ಕಾಫಿ, ತಿಂಡಿ ತೆಗೆದುಕೊಂಡು ಎದ್ದು ಹೋದ. ದಮ್ಮೆತ್ತುವ ಧೈರ್ಯವಾಗದೆ ಪೈಗಳು ನಿಂತು ನೋಡುತ್ತಲೇ ಇದ್ದರು.

೦ ೦ ೦

ಹೀಗೆ ಪ್ರತ್ಯಕ್ಷನಾದವನು ಮತ್ತಾರೂ ಅಲ್ಲ – ನಮ್ಮವನೇ ಆದ ದೂಮಣ್ಣ ಬಂಟ ! ದೂಮಣ್ಣ ದುಗ್ಗು ಹೆಣ್ಣಿಗೆ ಬಸಿರು ಮಾಡಿ, ತಡೆಯಲು ಬಂದ ಆಕೆಯನ್ನು ಇಟ್ಟುಕೊಂಡಿದ್ದ ಹಳೆ ಮನೆ ಭಟ್ಟರನ್ನು ಕುಡುಗೋಲಿನಿಂದ ತರಿದು ಕೊಂದು ಜೈಲಿಗೆ ಹೋದವನು ಬಿಡುಗಡೆಯಾಗಿ ಇದೀಗ ಹೊರಬಂದಿದ್ದ. ಇಷ್ಟು ವರ್ಷಗಳ ಕಾಲ ಅವನು ಜನಮನದಿಂದ ಆಳಿಸಿಹೋಗಿದ್ದ. ನೀರಿಗೆ ಹೋದ ಹೆಣ್ಣುಗಳನ್ನು ಅಲ್ಲಿಂದಲೇ ಹಾರಿಸುತ್ತಿದ್ದ. ಯಾವ ಮಾಯದಲ್ಲೋ ರಾತ್ರೋರಾತ್ರಿ ಗೋದಾಮುಗಳಿಂದ ಅಕ್ಕಿ, ಗೋಧಿಗಳನ್ನು ಮಾಯ ಮಾಡುತ್ತಿದ್ದ ದೂಮಣ್ಣ ಊರ ಚರಿತ್ರೆಯಲ್ಲಿ ಸಂದುಹೋಗಿದ್ದ.

ಭಟ್ಟರನ್ನು ಅವನು ತರಿದು ಕೊಂದ ಎಂಬುದಕ್ಕೆ ಸರಿಯಾದ ಸಾಕ್ಷಿಯೇನೂ ಇರಲಿಲ್ಲ. ಚಳಿಗಾಲದ ಹಲವು ರಾತ್ರಿಗಳಲ್ಲಿ ತನ್ನ ಮೈಯನ್ನು ಈ ಹಿಂದೆ ಯಾರೂ ಮಾಡದಂತೆ ಬಿಸಿ ಮಾಡಿದ ಬಂಟನ ಎದುರು ಸಾಕ್ಷಿ ಹೇಳುವುದಕ್ಕೆ ದುಗ್ಗು ಹೆಣ್ಣು ಸಹಜವಾಗಿ ನಿರಾಕರಿಸಿದ್ದಳು. ಆದರೆ ಇವನ ಕೆಂಗಣ್ಣುಗಳನ್ನೂ ಮಂಸಖಂಡಗಳನ್ನೂ ನೋಡಿದ ನ್ಯಾಯಾಧೀಶರು ಇವನೇ ಕೊಂದಿರಬೇಕು ಎಂದು ತೀರ್ಮಾನಿಸಿದರು.

ದೂಮಣ್ಣನನ್ನು ಕಂಡು ದುಗ್ಗುವಿಗೆ ಸಂತೋಷವಾಯಿತು. ಅವನ ಕೊರಳಿಗೆ ಜೋತುಬಿದ್ದು, ದಟ್ಟವಾಗಿ ಬೆಳೆದಿದ್ದ ಗಡ್ಡ ಮೀಸೆಗಳ ನಡುವೆ ತುಟಿಗಳನ್ನು ಹುಡುಕಿ ಹಿಡಿದು ಮುತ್ತು ಕೊಟ್ಟಳು. ದೂಮಣ್ಣ ದುಗ್ಗುವಿನ ಮನೆಯಲ್ಲೇ ಕ್ಯಾಂಪು ಮಾಡಿದ. ಆದರೂ ಕಾಲವೆಂಬುದು ಆ ಹೆಣ್ಣಿನ ಮೇಲೆ ಕೆಲಸ ಮಾಡಿತ್ತು. ಹಿಂದೊಮ್ಮೆ ಬಿಗಿಯಾಗಿದ್ದ ಮೊಲೆಗಳು ಈಗ ಜೋತುಬಿದ್ದಿದ್ದವು. ಕಪ್ಪಾಗಿ ಆಕರ್ಷಕ ವಾಗಿದ್ದ ತಲೆಗೊದಲು ಬಿಳಿಯಾಗಲು ತೊಡಗಿತ್ತು. ಬೇರೆ ನೆಲೆಯಿಲ್ಲದ ದೂಮಣ್ಣ ಅವಳೊಂದಿಗೆ ಇರಬೇಕಾಯಿತು.

ಸದಾ ಅನ್ವೇಷಣೆಯಲ್ಲಿದ್ದ ದೂಮಣ್ಣನ ಕಣ್ಣುಗಳಿಗೆ ಕಳ್ಳರಾಮನ ಹೊಸ ಹೆಣ್ಣು ಬಿದ್ದಳು. ದೂಮಣ್ಣ ರಾಮನ ಮನೆಯ ಸುತ್ತ ಸುಳಿಯುವುದು ಮೊದಲಾಯಿತು.

ರಾಮನು ರೇಗಿದ. ಒಂದು ನೆಲೆಗೆ ಬಂದಿದ್ದ ತನ್ನ ದಿನಚರಿಯ ಮೇಲೆ ಇದೆಂಥ ಶನಿ ವಕ್ರಿಸಿತು ಎಂದುಕೊಂಡ. ಇವನೊಂದಿಗೆ ಎಂದಾದರೊಂದು ದಿನ ಮುಖಾಮುಖಿ ಅನಿವಾರ್ಯ ಎನಿಸಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡ.

೦ ೦ ೦

ನಮ್ಮೂರ ಪೇಟೆಯಲ್ಲಿ ಹೆಸರಿಗೆ ನಾಲ್ಕು ಅಂಗಡಿಗಳು. ಹಗಲು ಮಂಕಾಗಿರುವ ಪೇಟೆಗೆ ಜೀವ ಬರುವುದು ಸಂಜೆಯ ಹೊತ್ತಿಗೆ. ಸುತ್ತಮುತ್ತಲಿಂದ ಜನ ಬಂದು ಸೇರುತ್ತಾರೆ. ಕೆಲವೊಮ್ಮೆ ಜಗಳಗಳಾಗುತ್ತವೆ.

ಶಿಂಗನ ಗೊಡಂಗಡಿಯ ಮುಂದೆ ನಿಂತು ಕಳ್ಳರಾಮ ತನ್ನ ಎಂದಿನ ಬಿಟ್ಟಿ ಸಿಗರೇಟನ್ನು ಸೇದುತ್ತ ನಿಂತಿದ್ದ. ಕುಡಿದು ತೂರಾಡುತ್ತಿದ್ದ ದೂಮಣ್ಣ ಬರುತ್ತಿರುವುದನ್ನು ಕಂಡು ಅವನ ಪಿತ್ತ ಕೆರಳಿತು. ಹಿಂದಿನ ದಿನವಷ್ಟೆ ನೀರಿಗೆ ಹೋದ ಅವನ ಹೆಂಡತಿಯನ್ನು ದೂಮಣ್ಣ ಕೆಣಕಿದ್ದ.

ನಾಳೆ ಬರುವುದು ಈ ದಿನವೇ ಬರಲಿ ಎಂದುಕೊಂಡ ರಾಮ, ಸಮಯ ಅವನ ಮಟ್ಟಿಗೆ ಪ್ರಶಸ್ತವಾಗಿತ್ತು. ನೆತ್ತಿಗೇರುವಂತೆ ಕುಡಿದಿದ್ದ ದೂಮಣ್ಣನನ್ನು ನೆಲಕ್ಕೊರಗಿಸುವುದು ಕಷ್ಟವಲ್ಲ ಎನಿಸಿ ತನ್ನ ಗುರುವನ್ನು ಮನಸ್ಸಿನಲ್ಲೇ ನೆನೆದ. ಏನ್ ಬೇಕಾದ್ರೂ ಮಾಡು, ಕುಡಿಯೋ ಚಟ ಒಂದ ಬುಟ್ಟುಡು ಎಂದಿದ್ದ ಮಲ್ಲಣ್ಣ, ಅಂದಿನಿಂದ ರಾಮ ಗಡಂಗಿನ ಸಮೀಪ ಕೂಡ ಸುಳಿದಿರಲಿಲ್ಲ. ದೂಮಣ್ಣ ಊರಲ್ಲಿ ಬಂದಿಳಿದಂದಿನಿಂದ ವ್ಯಾಯಾಮಕ್ಕೂ ರಾಮ ಬೇರೆ ತೊಡಗಿದ್ದೆ.

ದೂಮಣ್ಣ ನೇರ ಶಿಂಗನ ಅಂಗಡಿಗೆ ಬಂದ. ಅಡ್ಡ ನಿಂತಿದ್ದ ರಾಮನನ್ನು ಒಂದು ಬದಿಗೆ ಸರಿಸಿ ಬೀಡಿ ಕಟ್ಟೊಂದನ್ನು ಕೈಯಲ್ಲಿ ತೆಗೆದ.

“ಯಾರಲೋ ಅಧಿಕ ಪ್ರಸಂಗಿ!” ಎಂದ ರಾಮ.

ದೂಮಣ್ಣ ಅದನ್ನು ಕಿವಿಗೆ ಹಾಕಿಕೊಳ್ಳದೆ ಬೀಡಿಯೊಂದನ್ನು ಬಾಯಿಗೆ ಹಾಕಿ ಬೆಂಕಿಗೆಂದು ಚಿಮಿಣಿ ಬುಡ್ಡಿಗೆ ಒಂದು ಕಾಗದದ ಚೂರನ್ನು ಇಳಿಸಿದ.

“ಸೂಳೇಮಗಾ ನನ್ಮಗನೇ!” ಎಂದು ಒದರುತ್ತ ರಾಮ ದೂಮಣ್ಣನ ಸಳಿಕೆ ಯಂಥ ಕೈಗೆ ಒಂದೇಟು ಹಾಕಿದ. ದೀಪದ ಬುಡ್ಡಿ ಕೆಳಗೆ ಬಿದ್ದು ಎಣ್ಣೆಗೆ ಬೆಂಕಿ ಹಿಡಿಯಿತು.

ಅಂಗಡಿಯೆದುರು ಯುದ್ಧವಾಗಲಿರುವುದನ್ನು ಗಮನಿಸಿ ಶಿಂಗ ಭಯದಿಂದ ತತ್ತರಿಸಿದೆ. ಅದನ್ನು ಹೇಗಾದರೂ ತಪ್ಪಿಸಿಲೆಂದು ಕುಳಿತಲ್ಲಿಂದೆದ್ದು ಹೊರಕ್ಕೆ ತಲೆ ಚಾಚಿ ಏನೋ ಹೇಳುವುದರಲ್ಲಿದ್ದ. ದೂಮಣ್ಣನ ಬಾಹುಗಳು ಅವನ ತಲೆಯನ್ನು ಬದಿಗೆ ಸರಿಸಿ ರಾಮನ ಕಾಲರನ್ನು ಹಿಡಿದು ಬೀದಿಗೆಳೆದುವು.

ಸುತ್ತಲೂ ಅಖಾಡವೊಂದು ನಿರ್ಮಾಣವಾಗುತ್ತಿದ್ದುದನ್ನು ಕಳ್ಳ ರಾಮ ಗಮನಿಸಿದ. ಪೇಟೆಗೆ ಬಂದಿದ್ದ ಜನರು, ಕುಡಿಯುತ್ತಿದ್ದ ಕಾಫಿಯನ್ನೂ, ಖರೀದಿಸುತ್ತಿದ್ದ ಸಾಮಾನುಗಳನ್ನೂ ಇದ್ದಲ್ಲೆ ಬಿಟ್ಟು ಬಂದು ಜಗಳದ ಸ್ಥಳದಲ್ಲಿ ಜಮಾಯಿಸಿದರು. ಯಾರೂ ಹಸ್ತಕ್ಷೇಪ ಮಾಡುವ ಧೈರ್ಯ ತೋರಿಸಲಿಲ್ಲ.

ಕಾಲರಿನಿಂದ ಕೈ ತೆಗೆದು ದೂಮಣ್ಣ ಒಂದು ನೊಣವನ್ನು ನೋಡುವಂತೆ ರಾಮನನ್ನು ನೋಡಿದ. ತನ್ನ ಕೈಚಳಕವನ್ನು ಪ್ರದರ್ಶಿಸಿ, ಈ ಊರಿನ ರೌಡಿ ಯಾರು ಎಂಬುದನ್ನು ದೂಮಣ್ಣನಿಗೆ ಮತ್ತು ಇತರರಿಗೆ ತೋರಿಸಿಕೊಡಲು ಇಂಥ ಅವಕಾಶ ಇನ್ನು ಸಿಗುವುದಿಲ್ಲ ಎಂದುಕೊಂಡ, ರಾಮ.

ಎದುರಾಳಿಯ ಹಸ್ತವನ್ನು ತಿರುವಿ ನೆಲದಲ್ಲಿ ಕೆಡಹುವುದೊಂದು ಪಟ್ಟು, ರಾಮ ದೂಮಣ್ಣನ ಮೇಲೆ ಅದನ್ನು ಪ್ರಯೋಗಿಸಿದ. ಆದರೆ ಅದರಿಂದ ಅವನ ಕೈ ಭುಜದಿಂದ ಹಿಸುಕಿ ಒಂದಿಂಚು ಕೆಳಗಿಳಿಯಿತಷ್ಟೆ ವಿನಾ ದೂಮಣ್ಣನಿಗೇನೂ ಆಗಲಿಲ್ಲ. ರಾಮನ ಬಲಗೈ ನಿಶ್ಚೇಷ್ಟಿತವಾಯಿತು. ಧೈರ್ಯಗುಂದದೆ ಎಡಗೈಯಿಂದ ಮತ್ತೆ ಅದೇ ಪ್ರಯೋಗವನ್ನು ಮಾಡಿ ನೋಡಿದ. ಅದಕ್ಕೂ ಮೊದಲ ಕೈಯದೇ ಗತಿಯಾಯಿತು.

ದೂಮಣ್ಣ ಮಾತ್ರ ಶಿಲೆಯಂತೆ ನಿಂತು ರಾಮನ ಮುಂದಿನ ಆಕ್ರಮಣವನ್ನು ಕಾಯುತ್ತಿದ್ದ.

ಎದುರಾಳಿಯ ಪಾದವನ್ನು ಪಾದದಿಂದ ಮೆಟ್ಟಿ ನಿಲ್ಲಿಸಿ ಗಲ್ಲಕ್ಕೆ ಮುಂದಲೆ ಯಿಂದ ಹೊಡೆಯುವುದು ಇನ್ನೊಂದು ಪಟ್ಟು. ಇದಕ್ಕೆ ಎಂಥವನೂ ನೆಲಕ್ಕೊರಗದೆ ಇರುವುದಿಲ್ಲವೆಂದು ಮಲ್ಲಣ್ಣ ಹೇಳಿದ್ದ. ರಾಮ ತನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ತನ್ನ ತಲೆಯನ್ನು ದೂಮಣ್ಣನ ಗಲ್ಲಕ್ಕೆ ಘಟ್ಟಿಸಲು ಯತ್ನಿಸಿದ. ಲೆಕ್ಕಾಚಾರ ತಪ್ಪಾಗಿತ್ತು. ಅವನ ಗಲ್ಲವನ್ನು ತಲುಪಲು ರಾಮ ಸ್ಟೂಲಿನ ಮೇಲೆ ನಿಂತರೂ ಸಾಧ್ಯವಿರಲಿಲ್ಲ.

ಇಂಥ ಉಪಟಳದಿಂದ ಒಮ್ಮೆಲೆ ಸಿಟ್ಟಿಗೆದ್ದ ದೂಮಣ್ಣ ರಾಮನ ಕುತ್ತಿಗೆಗೆ ಕೈ ಹಾಕಿ ಅವನ ತಲೆಯನ್ನು ಬೊಂಡದಂತೆ ತಿರುವಿದ್ದನ್ನು ಜನರು ಗಮನಿಸಿದರು. ಮರುನಿಮಿಷ ರಾಮ ಧರಗೊರಗಿದ್ದ.

೦ ೦ ೦

ನಮ್ಮೂರ ಪೋಲೀಸರು ಬಹಳ ಶಾಂತ ಸ್ವಭಾವದವರು. ಮರುದಿನ ಅವರು ಬಂದು ಮಹಜರು ನಡೆಸಿ, ರಾಮನ ಅಂಗಾಂಗಳನ್ನು ಹೆಕ್ಕಿ ತೆಗೆದು ಗೋಣಿಯಲ್ಲಿ ಕಟ್ಟಿ ತೆಗೆದುಕೊಂಡು ಹೋಗುವಾಗ ಮಧ್ಯಾಹ್ನ ದಾಟಿತ್ತು. ದುಗ್ಗುವಿನ ಕೋಳಿ ಗೂಡಿನಲ್ಲಿ ಅಡಗಿ ಕುಳಿತಿದ್ದ ದೂಮಣ್ಣ ಬಂಟ ಬಂದೂಕಿನ ತಿವಿತಕ್ಕೆ ಹೊರಬಂದು ಶರಣಾಗತನಾದ. ಅವನು ಇನ್ನು ಹದಿನಾಲ್ಕು ವರ್ಷ ಊರಿಗೆ ಮರಳುವುದಿಲ್ಲವೆಂದು ಎಲ್ಲರಿಗೂ ಸಮಾಧಾನ.

ಕಳ್ಳ ರಾಮನು ಪರಿಷ್ಕರಿಸಿದ ಕಲೆಯನ್ನು ನಮ್ಮೂರವರು ಜೀರ್ಣವಾಗುವುದಕ್ಕೆ ಬಿಟ್ಟಿಲ್ಲ. ಕಳ್ಳ ರಾಮನ ಸ್ಥಾನದಲ್ಲಿ ಕಳ್ಳಕಿಟ್ಟುವೂ, ದೂಮಣ್ಣ ಬಂಟನ ಸ್ಥಾನದಲ್ಲಿ ಶೀನಣ್ಣ ಬಂಟನೂ ಇದ್ದು, ತಂತಮ್ಮ ಕೈಚಳಕಳನ್ನು ಪ್ರದರ್ಶಿಸುತ್ತಿದ್ದಾರೆ. ಹಿಂದಿನವರ ತಪ್ಪಿನಿಂದ ಅವರು ಸಾಕಷ್ಟು ಕಲಿತುಕೊಂಡಿದ್ದಾರೆ. ಅವರೆಂದೂ ಪರಸ್ಪರರ ದಾರಿಗಳನ್ನು ಅಡ್ಡ ಹಾಯುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಚಿತ
Next post ಗೀಳು

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys